
ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
1st April 2025

ಯಾದಗಿರಿ | ಮುಸ್ಲಿಂ ಸಮುದಾಯದ ವಿಶಿಷ್ಟ ಹಬ್ಬ ರಂಜಾನ್ ಅನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಜಿಲ್ಲಾ ನ್ಯಾಯಾಲಯ ಎದುರುಗಡೆ ಇರುವ ( ಖಾಧಿಮ್ ) ಹಳೆ ಈದ್ಗಾ ಮೈದಾನ ಹಾಗೂ ಸ್ಟೇಷನರಿಯಾದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇಸ್ಲಾಂ ಕ್ಯಾಲೆಂಡರ್‌ನ 9ನೇ ತಿಂಗಳಿನಲ್ಲಿ ಉಪವಾಸದ ಹಬ್ಬವೆಂದೇ ಕರೆಸಿಕೊಳ್ಳುವ ಈ ಆಚರಣೆ ನಡೆಯುತ್ತದೆ. ಅಂತೆಯೆ ಈ ಮಾಸದಲ್ಲಿ 29 ದಿನ ಉಪವಾಸ ಆಚರಣೆ ಮಾಡಿದ ನಗರದ ಮುಸ್ಲಿಂ ಸಮುದಾಯದವರು ಕಡೇ ದಿನ ‘ಈದ್ ಉಲ್ ಫಿತರ್’ ಆಚರಿಸಿದರು. ಎಲ್ಲೆಡೆ ಬಡವರು ಶ್ರೀಮಂತರೆನ್ನದೆ ಹಬ್ಬದಲ್ಲಿ ಭಾಗವಹಿಸಿ ಪರಸ್ಪರ ಆಲಿಂಗಿಸಿ ಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಮಾನ್ಯವಾಗಿತ್ತು.
ಪ್ರಾರ್ಥನೆಗೆ ತೆರಳುವ ಮುನ್ನ ಸಮುದಾಯದ ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಇಂತಿಷ್ಟು ಅಂಶವನ್ನು ದಾನವಾಗಿ ನೀಡಿದರು. ಕೆಲವರು ಗೋಧಿ, ಅಕ್ಕಿ, ರಾಗಿ ನೀಡಿದರೆ ಇನ್ನು ಹೆಚ್ಚು ಸ್ಥಿತಿವಂತರು ಗೋಡಂಬಿ, ದ್ರಾಕ್ಷಿ, ಅಂಜೂರ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಪ್ರಾರ್ಥನೆಗೆ ತೆರಳುವಾಗ ಒಂದು ಹಾದಿಯಲ್ಲಿ ತೆರಳಿದರೆ ಬರುವಾಗ ತಮ್ಮ ಹಿರಿಯರ ಸಮಾಧಿಗಳಿಗೆ ನಮಸ್ಕರಿಸಿ ಮತ್ತೊಂದು ಹಾದಿಯಲ್ಲಿ ಮನೆಗೆ ತೆರಳಿದರು.
ಚಂದ್ರನನ್ನು ನೋಡಿ ಉಪವಾಸವನ್ನು ಆರಂಭಿಸಲಾಗುತ್ತದೆ. ಅದೇ ರೀತಿ 29 ದಿನ ಪೂರ್ಣಗೊಂಡ ನಂತರ ಚಂದ್ರನ ನೋಡಿ ಉಪವಾಸ ಅಂತ್ಯಗೊಳಿಸ ಲಾಗುತ್ತದೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಉಪಾಹಾರ ಸೇವಿಸಲಾಗುತ್ತದೆ. ನಂತರ ಸಂಜೆ ಸೂರ್ಯ ಮುಳುಗಿದ ನಂತರ ಆಹಾರ ಸೇವಿಸಲಾಗುತ್ತದೆ.
ಬೆಳಗ್ಗೆಯೆ ಪ್ರಾರ್ಥನೆಗೂ ಮುನ್ನ ‘ಶೀರ್ ಕುರ್ಮಾ’ ಸೇವಿಸುತ್ತಾರೆ. ಈ ತಿನಿಸು ಈ ಹಬ್ಬದ ಒಂದು ವಿಶಿಷ್ಟ ಖಾದ್ಯ ವಾಗಿದೆ.
ಹಾಲು, ಶಾವಿಗೆ, ಕರ್ಜೂರ, ಕೋವಾ, ಸೇರಿದಂತೆ ಇನ್ನಿತರ ಡ್ರೈ ಹಣ್ಣುಗಳನ್ನು ಬೆರೆಸಿ ತಯಾರು ಮಾಡಲಾಗುತ್ತದೆ.
ಕೊಡುಗೆ ವಿಶೇಷ: ಈ ಹಬ್ಬದ ಮತ್ತೊಂದು ವಿಶೇಷವೆಂದರೆ ದೊಡ್ಡವರು ಚಿಕ್ಕಮಕ್ಕಳಿಗೆ ಈದಿ (ಕೊಡುಗೆ) ನೀಡುತ್ತಾರೆ. ಮಕ್ಕಳು ಈ ಹಬ್ಬದ ದಿನ ಕೊಡುಗೆ ಸ್ವೀಕರಿಸುವುದರಲ್ಲಿಯೂ ತಲ್ಲೀನರಾಗಿರುತ್ತಾರೆ. ಪ್ರತಿಯೊಬ್ಬರು ನಿನಗೆಷ್ಟು ಸಿಕ್ಕಿತು? ಎಂದು ಸಂತೋಷದಿಂದ ಕೊಡುಗೆ ಬಗ್ಗೆ ಸಂಭ್ರಮದಿಂದ ಮಾತನಾಡಿಕೊಳ್ಳುವುದು ಕಂಡು ಬಂತು.

ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದರ 370ಕ್ಕೆ ಹೆಚ್ಚಳ ಸಮಾನ ಕೆಲಸಕ್ಕೆ ಸಮಾನ ಕೂಲಿ ಮಹಿಳಾ ಮತ್ತು ಪುರುಷರಿಗೆ ಸಮಾನ ಕೂಲಿ:

ಬೇಸಿಗೆ ನಿಮಿತ್ಯ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕು ಮಟ್ಟದ ಸಭೆ